ಶಿವಮೊಗ್ಗದಲ್ಲಿ ವಾಹನ ಸವಾರರೇ ಎಚ್ಚರ ! ಮೂರೇ ತಿಂಗಳಲ್ಲಿ  70 ಸಾವಿರ ಪ್ರಕರಣ ! ಬರೋಬ್ಬರಿ 4.84 ಕೋಟಿ ದಂಡ !

ಶಿವಮೊಗ್ಗದಲ್ಲಿ ವಾಹನ ಸವಾರರೇ ಎಚ್ಚರ ! ಮೂರೇ ತಿಂಗಳಲ್ಲಿ 70 ಸಾವಿರ ಪ್ರಕರಣ ! ಬರೋಬ್ಬರಿ 4.84 ಕೋಟಿ ದಂಡ !

ಶಿವಮೊಗ್ಗ : ನಗರದಲ್ಲಿ ಸ್ಮಾರ್ಟ್‌ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ಆ.28ರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ ಮೂರೇ ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬರೋಬ್ಬರಿ 4.84 ಕೋಟಿ ರೂ. ವಿಧಿಸಿದ್ದು, 70 ಸಾವಿರ ಸವಾರರ ಮನೆ ಬಾಗಿಲಿಗೆ ಹೆಲ್ಮಟ್ ಧರಿಸದೇ ಓಡಿಸುವುದು, ಮದ್ಯ ಸೇವಿಸಿ ವಾಹನ ಚಲಾವಣೆ, ಅಜಾಗಕರೂಕತೆ ಮತ್ತು ಅತಿವೇಗ ತಡೆ ಸೇರಿದಂತೆ ವಿವಿಧ ಬಗೆಯ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್‌ಗಳು ರವಾನೆಯಾಗಿವೆ.

ಶಿವಮೊಗ್ಗದಲ್ಲಿ ಪೊಲೀಸರೇ ರಸ್ತೆ ಬದಿ ಅಥವಾ ಪ್ರಮುಖ ವೃತ್ತಗಳಲ್ಲಿ ವಾಹನಗಳ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಇದೀಗ ನಗರಾದ್ಯಂತ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾಗಳ ಕಣ್ಗಾವಲಿರಿಸಿದ್ದು ಸಂಚಾರ ನಿಯಮ ಪಾಲಿಸದಿದ್ದಕ್ಕೆ ನವೆಂಬರ್ ಅಂತ್ಯಕ್ಕೆ 70,361 ಕೇಸ್‌ಗಳು ಬಿದ್ದಿವೆ. ಸಂಚಾರ ನಿಯಮ ಉಲ್ಲಂಘಿಸಿದ ಎರಡ್ಮೂರು ದಿನದಲ್ಲೇ ದಂಡದ ನೋಟಿಸ್ ವಾಹನ ಸವಾರರ ಮನೆ ಬಾಗಿಲಿಗೆ ಅಥವಾ ಮೊಬೈಲ್‌ಗಳಿಗೆ ರವಾನೆ ಆಗುತ್ತಿದ್ದು, 90 ದಿನದಲ್ಲಿ 3,621 ಮಂದಿ 30.80 ಲಕ್ಷ ರೂ. ದಂಡ ಪಾವತಿಸಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಯಾವುದಕ್ಕೆ ಎಷ್ಟು ದಂಡ ವಿಧಿಸಲಾಗಿದೆ 

ಟ್ರಾಫಿಕ್ ಸಿಗ್ನಲ್ ಜಂಪ್ 61,831 4.33 ಕೋಟಿ ರೂ.

ಸೀಟ್‌ಬೆಲ್ಟ್ ಧರಿಸದ 461 12.65 ಲಕ್ಷ ರೂ.

ವಾಹನಗಳ ಅತಿವೇಗ ಚಾಲನೆ 3,269 35.02 ಲಕ್ಷ ರೂ.

ಹೆಲ್ಮೇಟ್ ಧರಿಸದೇ ಚಾಲನೆ 3,991 21.76 ಲಕ್ಷ ರೂ.

ಟ್ರಿಪಲ್ ರೈಡಿಂಗ್ 195 1.78 ಲಕ್ಷ ರೂ.

ಪೊಲೀಸ್ ಇಲಾಖೆಯು ಮೂರೇ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ವಾಹನಗಳ ಸವಾರರಿಗೆ ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನೋಟಿಸ್ ನೀಡಿದೆ. ಹಲವರಿಗೆ ಮೊಬೈಲ್‌ಗೆ ಸಂದೇಶವನ್ನೂ ರವಾನಿಸಿದೆ. ಆದರೆ ಅದರಲ್ಲಿ 3,621 ಮಂದಿ ಮಾತ್ರ ನೋಟಿಸ್‌ಗೆ ಹೆದರಿ 30.80 ಲಕ್ಷ ರೂ. ದಂಡ ಕಟ್ಟಿದ್ದಾರೆ. ಇನ್ನೂ 4,53,64,300 ರೂ. ದಂಡ ಸಂಗ್ರಹ ಆಗಬೇಕಿದೆ. ಬಹಳಷ್ಟು ಸವಾರರು ನೋಟಿಸ್ ಮತ್ತು ಮೆಸೇಜ್‌ಗೂ ಹೆದರದೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಯಲ್ಲಿ ಸಿಗ್ನಲ್ ಜಂಪ್ ಮಾಡುತ್ತಿರುವ ಪ್ರಕರಣಗಳೇ ಹೆಚ್ಚಿನ ಪ್ರಮಾಣದಲ್ಲಿವೆ ಎಂಬುದು ವಿಶೇಷವಾಗಿದೆ. ಈ ಹಿಂದೆ ಹಳೆಯ ಟ್ರಾಫಿಕ್ ಆಟೋಮೇಷನ್ ತಂತ್ರಾಂಶದ ಮೂಲಕ ನೋಟಿಸ್ ಸೃಜನೆ ಮಾಡಿ ಅದನ್ನು ಮಾಲೀಕರಿಗೆ ಕಳುಹಿಸಲಾಗುತ್ತಿತ್ತು. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಪಿಸಿದ ಐಟಿಎಂಎಸ್ ತಂತ್ರಾಂಶದಲ್ಲಿ ನೋಟಿಸ್ ಸೃಜನೆ ಮಾಡಲಾಗುತ್ತಿದ್ದು ಫೋಟೋ ಸಹಿತ ನೋಟಿಸ್ ಮನೆಗೆ ರವಾನೆ ಆಗುತ್ತಿದೆ. ಮೊಬೈಲ್‌ಗಳಿಗೆ ಸಂದೇಶ ಮಾತ್ರ ರವಾನೆ ಆಗುತ್ತಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.